ಮಾನಸಿಕ ದೂರ	(ಸಾಧಾರಣೀಕರಣ ತತ್ವ)ಸೌಂದರ್ಯ ಮೀಮಾಂಸೆಗೆ ಸಂಬಂಧಿಸಿದ ಒಂದು ಪ್ರಮುಖ ತತ್ತ್ವ. ಇದನ್ನು ಪ್ರತಿಪಾದಿಸಿದವ ಎಡ್ವರ್ಡ್ ಬುಲ್ಲೋ (1912). ಯಾವ ಒಂದು ನೆಲೆಯಲ್ಲಿ ಕಲಾಕೃತಿಯಿಂದಾಗಲಿ, ಲೋಕವಸ್ತುವಿನಿಂದಾಗಲಿ ನಾವು ಸೌಂದರ್ಯಾನುಭವ ಪಡೆಯಲು ಸಾಧ್ಯವೊ ಅಂಥ ಒಂದು ನಿಲುವಿನಲ್ಲಿ ನಮ್ ಹಾಗೂ ವಸ್ತುವನ್ನು ನಿಲ್ಲಿಸಿಕೊಳ್ಳುವ ಕೌಶಲವೇ ಮಾನಸಿಕ ದೂರ (ಸೈಕಿಕಲ್ ಡಿಸ್ಟೆನ್ಸ್). ಮಾನಸಿಕ ಅಂತರ, ಮನೋದೂರ, ಅಲೌಕಿಕ ಅಂತರ ಪರ್ಯಾಯ ಪದಗಳು. ಇವು ಕಲಾವಿದ ಮತ್ತು ಪ್ರೇಕ್ಷಕನಿಗೆ ಇರಬೇಕಾದ ಒಂದು ವಿಶಿಷ್ಟ ಸಂಬಂಧಾಂತರವನ್ನು ಸೂಚಿಸುತ್ತವೆ. ನಿತ್ಯ ಜೀವನದ ವೈಯಕ್ತಿಕ ಆಶೆ ಆಕಾಂಕ್ಷೆಗಳಿಂದ, ಪ್ರೇರಣೆ ಫಲಗಳಿಂದ ಬಾಹ್ಯ ಘಟನೆಗಳನ್ನು ಬೇರ್ಪಡಿಸಿದಾಗ ಮಾನಸಿಕ ದೂರತ್ವದ ಪರಿವರ್ತನೆ ಸಂಭವಿಸುತ್ತದೆ. ಈ ನಿರ್ಲಿಪ್ತತೆಗೆ ಕಾರಣವಾಗುವ ಮನಸ್ಸಿನ ಸ್ಥಿತಿಯನ್ನೇ ಮಾನಸಿಕ ದೂರ ಎಂದು ಬುಲ್ಲೋ ಕರೆದಿದ್ದಾನೆ.

ಮಾನಸಿಕ ದೂರ ವಸ್ತು ಸಂಗತಿಗಳಿಗೆ ಅತಿ ಸಮೀಪವೂ ಅಲ್ಲದ ಅತಿ ದೂರವೂ ಅಲ್ಲದ ಒಂದು ನಿಲುವು. ಅತಿ ಸಮೀಪವೆಂದರೆ ಲೌಕಿಕಾಪೇಕ್ಷೆಗಳಾದ ಇಷ್ಟಾನಿಷ್ಟ, ಲಾಭ ನಷ್ಟ ಇತ್ಯಾದಿಗಳಿಗೆ ಒಳಗಾಗುವ ಪ್ರವೃತ್ತಿ. ಅತಿ ದೂರವೆಂದರೆ ಅವಕ್ಕೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂಥ ತಟಸ್ಥತೆ ಅಥವಾ ನಿರ್ಲಿಪ್ತತೆಗೆ ಒಳಗಾಗುವ ಪ್ರವೃತ್ತಿ. ಉದಾಹರಣೆಗೆ ಬೆಂಕಿಯನ್ನು ಕಾಯಿಸುತ್ತಿರುವಾಗ ಅತಿ ಸಮೀಪ ಕುಳಿತರೆ ಕಾವು ಹೆಚ್ಚು, ಅತಿ ದೂರ ಕುಳಿತರೆ ಕಾವೇ ತಟ್ಟದು. ಆದರೆ ಈ ಎರಡರ ನಡುವಣ ಹಿತವಾದ ಅಂತರದಲ್ಲಿದ್ದರೇ ಸುಖ, ಆನಂದ ಲಭಿಸುತ್ತವೆ. ಈ ಬಗೆಯಾದ ದೂರವನ್ನು (ಲಾಸ್ ಆಫ್ ಡಿಸ್ಟೆನ್ಸ್) ಒಳಗಾಗುತ್ತದೆ. ಇದರಲ್ಲಿ ಎರಡು ವಿಧ: ವಸ್ತು ಹಾಗೂ ಅದು ಪ್ರೇರಿಸುವ ಅನುಭವದೊಂದಿಗೆ ಅತಿ ಸಮೀಪವಾಗಿ ನಿಲ್ಲುವುದರಿಂದ ಒದಗುವ ಅನತಿದೂರ ದೋಷ (ಅಂಡರ್ ಡಿಸೈನ್ಸ್); 2 ವಸ್ತು ಹಾಗೂ ಅದು ಪ್ರೇರಿಸುವ ಅನುಭವಕ್ಕೆ ಅತಿ ದೂರ ನಿಲ್ಲುವುದರಿಂದ ಒದಗುವ ಅತಿದೂರ ದೋಷ (ಓವರ್ ಡಿಸ್ಟೆನ್ಸ್).

ಕಲಾನುಭವ ಕುರಿತು ನಾಟಕವನ್ನು ಕೇಂದ್ರದಲ್ಲಿರಿಸಿಕೊಂಡು ಚರ್ಚಿತವಾಗಿರುವ ಭಾರತೀಯ ಕಾವ್ಯಮೀಮಾಂಸೆಯ ವಿಚಾರಗಳು ಪಾಶ್ಚಾತ್ಯ ಸೌಂದರ್ಯ ಮೀಮಾಂಸೆಯಲ್ಲಿ ಚರ್ಚಿತವಾಗಿರುವ ಮಾನಸಿಕ ದೂರ ತತ್ತ್ವದಲ್ಲಿಯ ಅನೇಕ ಸಂಗತಿಗಳಿಗೆ ಸಂವಾದಿಯಾಗಿವೆ. ಆದರೂ ಈ ಎರಡಕ್ಕೂ ದೂರ ತತ್ತ್ವದಲ್ಲಿಯ ಅನೇಕ ಸಂಗತಿಗಳಿಗೆ ಸಂವಾದಿಯಾಗಿವೆ. ಆದರೂ ಈ ಎರಡಕ್ಕೂ ಪ್ರಮುಖ ವ್ಯತ್ಯಾಸವೊಂದಿದೆ. ನಾಟಿಕದ ವಿಭಾವ ಮತ್ತು ಅವು ಅಭಿವ್ಯಕ್ತಪಡಿಸುವ ಭಾವಗಳೊಂದಿಗೆ ಪ್ರೇಕ್ಷಕರು ಇಟ್ಟುಕೊಳ್ಳಬೇಕಾದ ಸಂಬಂಧಾಂತರಗಳು ಭಾರತೀಯ ತತ್ತ್ವದಿಂದ ತಿಳಿದುಬರುತ್ತವೆ. ಅಲ್ಲಿಯ ಮುಖ್ಯ ಗಮನ ಸಹೃದಯಾನುಭವ ಕುರಿತದ್ದು. ಆದರೆ ಮಾನಸಿಕ ದೂರ ಕವಿ ಹಾಗೂ ಓದುಗರಿಬ್ಬರನ್ನೂ ಕುರಿತದ್ದು.

ಕಲಾನಿರ್ಮಿತಿ ಅಥವಾ ಕಲಾಸ್ವಾದನೆಗೆ ಮಾನಸಿಕ ದೂರ ಒಂದು ಮೂಲ ಸೂತ್ರ. ಈ ದೂರವನ್ನು ಕಾಯ್ದುಕೊಳ್ಳದಿದ್ದರೆ ದೂರಭಂಗದ ದೋಷಕ್ಕೆ ಒಳಗಾಗಬೇಕಾಗುತ್ತದೆ. ಈ ದೋಷಗಳನ್ನೇ ಭಾರತೀಯ ಆಲಂಕಾರಿಕರು ರಸವಿಘ್ನಗಳೆಂದು ಕರೆದಿದ್ದಾರೆ. ಇವುಗಳಲ್ಲಿ ಕೆಲವು ಕಲಾವಿದನ ಅಸಾಮಥ್ರ್ಯದಿಂದ ಸಂಭವಿಸುವಂಥವು. ಮತ್ತೆ ಕೆಲವು ಓದುಗ ಅಥವಾ ಪ್ರೇಕ್ಷಕನ ಅಸಾಮಥ್ರ್ಯದಿಂದ ಸಂಭವಿಸುವಂಥವು.

ನಾಟ್ಯದ ರಸಾಸ್ವಾದ ಸಮಯದಲ್ಲಿ ಪ್ರೇಕ್ಷಕ ಕಾಯ್ದುಕೊಳ್ಳುವ ಅಂತರದ ಬಗ್ಗೆ ಭಾರತೀಯ ಆಲಂಕಾರಿಕರಾದ ಭಟ್ಟನಾಯಕ ಮತ್ತು ಅಭಿನವಗುಪ್ತ ವ್ಯಾಖ್ಯಾನಿಸಿದ್ದಾರೆ. ಅವು ಎಡ್ವರ್ಡ್ ಬುಲ್ಲೋ ಪ್ರತಿಪಾದಿಸಿರುವ ಮಾನಸಿಕ ದೂರವನ್ನೇ ಹೋಲುತ್ತವೆ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ